ಭಾರಿ ತ್ರಿಕೋನದಂತೆ ಇರುವ, ಬಹುತೇಕ ಉಷ್ಣವಲಯದಲ್ಲಿರುವ, ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣಕ್ಕೆ ಕ್ರಮೇಣ ಕಿರಿದಾಗುತ್ತ ದಕ್ಷಿಣದ ತುದಿಯಲ್ಲಿ ಎರಡೂ ಬಾಹುಗಳು ಕೂಡುವ, ಸಮಭಾಜಕವೃತ್ತದಿಂದ ದಕ್ಷಿಣಕ್ಕೆ ಇದೆ. ಉತ್ತರಾರ್ಧಗೋಳದಲ್ಲಿ ಬೇಸಗೆಯಿದ್ದಾಗ ಇಲ್ಲಿ ಚಳಿಗಾಲ. ಉತ್ತರದ ಋತುಗಳಿಗೆ ವಿಲೋಮವಾಗಿ ಇಲ್ಲಿ ಋತು, ಆವರ್ತಿಸುತ್ತದೆ. ಕೊಲಂಬಿಯ ವೆನಿಜೂಲ, ಗಯಾನ, ಮೆಕ್ಸಿಕೋ, ವೆಸ್ಟ್‍ಇಂಡಿಸ್‍ನಲ್ಲಿ ಮಾತ್ರ ಹೀಗಿಲ್ಲ.

ಖಂಡದ ಪಶ್ಚಿಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಆಂಡೀಸ್ ಪರ್ವತ ಶ್ರೇಣಿ ಹಬ್ಬಿದೆ. ಹಿಮಾಲಯವನ್ನು ಬಿಟ್ಟರೆ ಇದೇ ಪ್ರಪಂಚದ ಅತ್ಯುನ್ನತ ಪರ್ವತ ಸಾಲು. ಓಡೋಸ್ ಡೆಲ್ ಸಾಲಾಡೋ ಮತ್ತು ಅಕೊನಿಡ್ವಾ ಪಶ್ಚಿಮಾರ್ಧಗೋಳದ ಅತ್ಯುನ್ನತ ಶಿಖರಗಳು. ಈ ಪರ್ವತ ಶ್ರೇಣಿಗಳ ನಡುವೆ ಬೊಲಿವಿಯ ಮತ್ತು ದಕ್ಷಿಣ ಪೆರುವಿನ ವಿಶಾಲ ಪ್ರದೇಶಗಳು ಇವೆ. ಪ್ರಸ್ಥಭೂಮಿಗಳು, ಇವು ಉಷ್ಣವಲಯದಲ್ಲಿದ್ದರೂ ಔನ್ನತ್ಯದಿಂದಾಗಿ ತಂಪಾಗಿವೆ. ಶಿಖರಗಳು ಹಿಮಾವೃತ. ಈ ಪರ್ವತಗಳಡಿಯಲ್ಲಿ ಹಲವು ಖನಿಜ ನಿಕ್ಷೇಪಗಳಿವೆ. ಆದರೆ ಈ ಪ್ರದೇಶದಲ್ಲಿ ಅಗ್ನಿಪರ್ವತಗಳು ಆಗಾಗ ಅನಾಹುತ ಎಸಗುತ್ತವೆ. ಭೂಕಂಪಗಳು ಆಗುತ್ತಲೇ ಇರುತ್ತವೆ. ಇಡೀ ನಗರಗಳೇ ನಾಶವಾಗಿರುವುದುಂಟು. ಖಂಡದ ಪೂರ್ವ ಪಾಶ್ರ್ವದಲ್ಲಿ ಗಯಾನ ಮತ್ತು ಬ್ರಜಿಲಿಯನ್ ಉನ್ನತದ ಪ್ರದೇಶಗಳಿವೆ ಇವಕ್ಕೂ ಆಂಡೀಸ್‍ಗೂ ನಡುವೆ ಮೈದಾನಗಳಿವೆ.

ಇಲ್ಲಿ ಹೆಚ್ಚುಜನ ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳನ್ನು ಮಾತನಾಡುತ್ತಾರೆ. ಆದ್ದರಿಂದ ಇದನ್ನು ಲ್ಯಾಟಿನ್ ಅಮೆರಿಕ ಎಂದು ಕರೆಯಲಾಗಿದೆ.
ಕೊಲಂಬಸ್ 1492ರಲ್ಲಿ ಲ್ಯಾಟಿನ್ ಅಮೆರಿಕವನ್ನು ಪತ್ತೆಹಚ್ಚಿದ. ಆ ವೇಳೆಯಲ್ಲಿ ಸ್ಥಳೀಯ ನಿವಾಸಿಗಳಾದ ಅಮೆರಿಕನ್ ಇಂಡಿಯನ್ನರು ಸಾವಿರಾರು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದರು. ಆಂಡೀಸ್ ಭಾಗದಲ್ಲಿ ‘ಇಂಕಾ’ ಮೆಕ್ಸಿಕೋದಲ್ಲಿ ಆಜ್ಟೆಕ್ ಮತ್ತು ಮಧ್ಯಅಮೆರಿಕದಲ್ಲಿ ಮಾಯಾ ನಾಗರಿಕತೆಗಳಿದ್ದುವು. ಯುರೋಪಿಯನ್ನರು ಈ ಪ್ರದೇಶಗಳನ್ನು ಸ್ಪೇನ್ ಹಾಗೂ ಪೋರ್ಚುಗಲ್‍ಗಳನ್ನೂ ವಶಪಡಿಸಿಕೊಂಡು ತಮ್ಮ ವಸಾಹಾತುಗಳನ್ನು ಸ್ಥಾಪಿಸಿದರು. ಇದರಿಂದ ಸ್ಥಳೀಯ ಸಂಸ್ಕೃತಿ, ಭಾಷೆ, ಕೈಗಾರಿಕೆಗಳು ನಶಿಸಿ ಯುರೋಪಿಯನ್ನರ ಸಂಸ್ಕೃತಿ ಬೆಳೆಯಿತು. 19ನೆಯ ಶತಮಾನದಲ್ಲಿ ಒಂದೊಂದೇ ವಸಾಹಾತುಗಳು ಸ್ವಾತಂತ್ರ್ಯ ಗಳಿಸಲು ಪ್ರಾರಂಭಿಸಿದುವು.

ಸ್ಥಾನ, ವಿಸ್ತೀರ್ಣ ಮತ್ತು ಗಾತ್ರ: ಇದು ಉ.ಅ. 33° ದ.ಅ. 56° ಮತ್ತು ಪ.ರೇ. 35° ದಿಂದ 117° ನಡುವೆ ಇದೆ. ಇದರ ಒಟ್ಟು ಭೂಭಾಗ 2,05,21,971 ಚ.ಕಿಮೀ. ಇದರಲ್ಲಿ ದಕ್ಷಿಣ ಅಮೆರಿಕ 1,77,98,500 ಚ.ಕಿಮೀ, ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ 25,11,954 ಚ.ಕಿಮೀ, ವೆಸ್ಟ್ ಇಂಡಿಸ್ ದ್ವೀಪಗಳು 2,11,517 ಚ.ಕಿಮೀ.

ಲ್ಯಾಟಿನ್ ಅಮೆರಿಕದ ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ, ಪಶ್ಚಿಮದಲ್ಲಿ ಪೆಸಿಫಿಕ್ ಸಾಗರ, ಉತ್ತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ದಕ್ಷಿಣದಲ್ಲಿ ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಸಾಗರಗಳು ಕಂಡುಬರುತ್ತವೆ.

ಲ್ಯಾಟಿನ್ ಅಮೆರಿಕದಲ್ಲಿ 33 ಸ್ವತಂತ್ರ ರಾಷ್ಟ್ರಗಳು ಮತ್ತು 13 ಅವಲಂಬಿತ ಭಾಗಗಳು ಇವೆ. ಇವುಗಳಲ್ಲಿ ಬ್ರಜಿಲ್ ದೊಡ್ಡದು. ಲ್ಯಾಟಿನ್ ಅಮೆರಿಕದ ಸೇ. 40 ರಷ್ಟು ಪ್ರದೇಶವನ್ನೂ ಮತ್ತು 1/3 ರಷ್ಟು ಜನಸಂಖ್ಯೆಯನ್ನೂ ಹೊಂದಿದೆ. ಬೊಲಿವಿಯ ಮತ್ತು ಪರಗ್ವೆಗಳಿಗೆ ಕರಾವಳಿ ಇಲ್ಲ, ಉಳಿದೆಲ್ಲವಕ್ಕೆ ಕಡಲ ತೀರಗಳಿವೆ.
ಪ್ರಾಕೃತಿಕ ವಿಭಾಗಗಳು: ಲ್ಯಾಟಿನ್ ಅಮೆರಿಕದಲ್ಲಿ 4 ಮುಖ್ಯ ಭೌಗೋಳಿಕ ವಿಭಾಗಗಳಿವೆ.

1. ಆಂಡೀಸ್ ಪರ್ವತ ಶ್ರೇಣಿ, 2. ಕೇಂದ್ರದ ತಗ್ಗು ಪ್ರದೇಶಗಳು, 3. ಪೂರ್ವದ ಉನ್ನತ ಭಾಗಗಳು, 4. ಮಧ್ಯ ಅಮೆರಿಕದ ಪರ್ವತ ಮತ್ತು ಪ್ರಸ್ಥಭೂಮಿಗಳು

1. ಆಂಡೀಸ್ ಪರ್ವತ ಶ್ರೇಣಿ: ಇದು ಪ್ರಪಂಚದ ಅತ್ಯಂತ ಉದ್ಧವಾದ ಪರ್ವತ ಶ್ರೇಣಿ, ಉತ್ತರದಲ್ಲಿ ಪನಾಮದಿಂದ ದಕ್ಷಿಣದ ಮೆಗಲಾನ್ ಜಲಸಂಧಿಯವರೆಗೆ ಸು. 7,200 ಕಿಮೀ ಉದ್ದವಿದೆ. ಇದರ ಸರಾಸರಿ ಎತ್ತರ 3,700 ಮೀ. ಹಲವಾರು ಶಿಖರಗಳು 6,000 ಮೀಟರ್‍ಗಳಿಗಿಂತ ಹೆಚ್ಚಾಗಿವೆ. ಈ ಪರ್ವತಶ್ರೇಣಿ ಸು. 240 ಕಿಮೀ ಅಗಲವಾಗಿದೆ. ಇದು ಮಡಿಕೆ ಪರ್ವತ. ಈ ಪರ್ವತದಲ್ಲಿ ತಾಮ್ರ, ಚಿನ್ನ, ಪಾದರಸ, ಪೆಟ್ರೋಲಿಯಮ್, ಪ್ಲಾಟಿನಮ್ ಮೊದಲಾದ ಖನಿಜಗಳಿವೆ. ಇಲ್ಲಿ ಉಗಮವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಚಿಕ್ಕವು, ಇವು ಪೆಸಿಫಿಕ್ ಸಾಗರವನ್ನು ಸೇರುತ್ತವೆ. ಪೂರ್ವಾಭಿಮುಖವಾಗಿ ಹರಿಯುವ ನದಿಗಳಲ್ಲಿ ಅತ್ಯಂತ ಹೆಚ್ಚು ನೀರಿರುತ್ತದೆ.

2. ಕೇಂದ್ರದ ತಗ್ಗು ಪ್ರದೇಶಗಳು: ಇದು ದಕ್ಷಿಣ ಅಮೆರಿಕದ ಅರ್ಧದಷ್ಟು ಭಾಗವನ್ನು ಆವರಿಸಿದೆ. ಇದು ಓರಿನೋಕೋ, ಲಾನೋಸ್ ಮತ್ತು ಅಮೆಜಾನ್ ಪ್ರದೇಶ ಹಾಗೂ ಪರಗ್ವೆಗಳನ್ನು ಒಳಗೊಂಡಿದೆ.

ಲಾನೋಸ್ ಪ್ರದೇಶ ಈಶಾನ್ಯದ ಉನ್ನತಭಾಗ ಮತ್ತು ಓರಿಯೋಂಕೋ ನದಿಯ ಮಧ್ಯ ಕಂಡುಬರುತ್ತದೆ. ಅಮೆಜಾನ್ ಪ್ರದೇಶದ ಸುತ್ತಲೂ ಉನ್ನತ ಪ್ರದೇಶವಿದೆ. ಗಯಾನದ ಉನ್ನತಭಾಗ ಈ ಪ್ರದೇಶವನ್ನು ಓರಿಯೊಂಕೋ ಪ್ರದೇಶದಿಂದ ಪ್ರತ್ಯೇಕಿಸಿದೆ.

3. ಪೂರ್ವದ ಉನ್ನತ ಭಾಗಗಳು: ಇವು ಆಂಡೀಸ್ ಪರ್ವತಗಳಿಗಿಂತ ಪುರಾತನ, ಅಗ್ನಿ ಮತ್ತು ಮರಳು ಶಿಲೆಗಳಿಂದ ಇವು ರಚನೆಯಾಗಿದೆ. ಉನ್ನತ ಪ್ರದೇಶ ಮತ್ತು ದಕ್ಷಿಣದಲ್ಲಿ ಬ್ರಜಿಲಿಯನ್ ಉನ್ನತಭಾಗಗಳನ್ನು ಗಯಾನ ಒಳಗೊಂಡಿದೆ.

4. ಮಧ್ಯ ಅಮೆರಿಕದ ಪರ್ವತ ಮತ್ತು ಪ್ರಸ್ಥಭೂಮಿಗಳು: ಪೂರ್ವ ಮತ್ತು ಪಶ್ಚಿಮ ಆಂಡೀಸ್ ಶ್ರೇಣಿಗಳ ನಡುವೆ ಪ್ರಸ್ಥಭೂಮಿಗಳಿವೆ. ಪೂರ್ವದಲ್ಲಿ ಪೂರ್ವಸಿಯಾರ ಮಾದ್ರ ಮತ್ತು ಪಶ್ಚಿಮದಲ್ಲಿ ಪಶ್ಚಿಮ ಸಿಯಾರಮಾದ್ರ ಶ್ರೇಣಿಗಳ ನಡುವೆ ಇರುವ ಪ್ರಸ್ಥಭೂಮಿಯಲ್ಲಿ ಮೆಕ್ಸಿಕೋ ಸಿಟಿ ಕಂಡುಬರುತ್ತದೆ. ಎತ್ತರದ ಶ್ರೇಣಿಗಳಲ್ಲಿ ಹಿಮ ಅವರಿಸಿದ ಜ್ವಾಲಾಮುಖಿಗಳಿವೆ.
ವಾಯುಗುಣ: ಲ್ಯಾಟಿನ್ ಅಮೆರಿಕ ಉತ್ತರದಲ್ಲಿ ವಿಸ್ತಾರವಾಗಿದ್ದು, ದಕ್ಷಿಣಕ್ಕೆ ಹೋದಂತೆ ಚಿಕ್ಕದಾಗುತ್ತಾಹೋಗುತ್ತದೆ. ಇದರ ಬಹುಭಾಗ ಉಷ್ಣವಲಯದಲ್ಲಿರುವುದರಿಂದ ಉಷ್ಣವಾಯುಗುಣವನ್ನು ಹೊಂದಿದೆ. ಆಂಡೀಸ್ ಪರ್ವತ ಹೆಚ್ಚು ಎತ್ತರವಾಗಿದ್ದು, ಪೂರ್ವ ಮತ್ತು ಪಶ್ಚಿಮದಲ್ಲಿಯ ವಾಯುಗುಣದ ಭಿನ್ನತೆಗೆ ಕಾರಣವಾಗಿದೆ. ಪೆಸಿಫಿಕ್ ಶೀತೋದಕ ಪ್ರವಾಹವಾದ ಪೆರುವಿಯನ್ ಅಥವಾ ಹಂಬೋಲ್ಟ್ ಉಷ್ಣಾಂಶ ಮತ್ತು ಮಳೆಯನ್ನು ಕಡಿಮೆಗೊಳಿಸಿದರೆ, ಅಟ್ಲಾಂಟಿಕ್ ಸಾಗರದ ಬ್ರಜಿಲಿಯನ್ ಉಷ್ಣೋದಕ ಪ್ರವಾಹ ಬ್ರಜಿಲ್ ತೀರದಲ್ಲಿ ಉಷ್ಣಾಂಶವನ್ನು ಹೆಚ್ಚಿಸುತ್ತದೆ.

ಬೇಸಗೆಯಲ್ಲಿ ಸರಾಸರಿ ಉಷ್ಣಾಂಶ 27°ಸೆಂ. ದಕ್ಷಿಣಕ್ಕೆ ಹೋದಂತೆ ಉಷ್ಣಾಂಶ ಕಡಿಮೆಯಾಗುವುದು. ಭೂಮಧ್ಯರೇಖೆಯಿಂದ ದಕ್ಷಿಣಕ್ಕೆ ಹೋದಂತೆ ಮಳೆಯ ಪ್ರಮಾಣ ಕಡಿಮೆಯಾಗುವುದು. ಮಧ್ಯ ಮತ್ತು ದಕ್ಷಿಣ ಅಮೆರಿಕದ ಉತ್ತರಭಾಗದಲ್ಲಿ ಜುಲೈನಲ್ಲಿ 27°ಸೆಂ. ಸರಾಸರಿ ಉಷ್ಣಾಂಶವಿರುವುದು. ಭೂಮಧ್ಯರೇಖೆಯ ದಕ್ಷಿಣದ ಪ್ರದೇಶದಲ್ಲಿ ಜುಲೈಯಲ್ಲಿ ಚಳಿಗಾಲ.

ಉತ್ತರದ ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ದಕ್ಷಿಣದ 55°ಅಕ್ಷಾಂಶಗಳವರೆಗೆ ವಿವಿಧ ರೀತಿಯ ವಾಯುಗುಣ ಕಂಡುಬರುತ್ತವೆ. ಉದಾ: ಸಮಭಾಜಕ ವೃತ್ತದ ವಾಯುಗುಣ, ಉಷ್ಣವಲಯದ ಸವನ್ನಾಮಾದರಿ, ಉಷ್ಣವಲಯದ ಸ್ಟೆಪ್ಸೀಮಾದರಿ, ಮರುಭೂಮಿಯ ವಾಯುಗುಣ, ಉಪೋಷ್ಣ ತೇವದ ವಾಯುಗುಣ, ಮೆಡಿಟರೇನಿಯನ್, ಸಮಶೀತೋಷ್ಣವಲಯ ಮತ್ತು ಉನ್ನತ ವಲಯದ ವಾಯುಗುಣ ಮೊದಲಾದವು.

ನದೀ ವ್ಯವಸ್ಥೆ: ಲ್ಯಾಟಿನ್ ಅಮೆರಿಕದಲ್ಲಿ 3 ಮುಖ್ಯ ನದೀ ವ್ಯವಸ್ಥೆಗಳಿವೆ. ಅವು-ಅಮೆಜಾನ್, ಓರಿನೋಕೋ, ಪರಗ್ವೆ-ಪರಾನ.

ಅಮೆಜಾನ್ ನದಿ ಪೆರುವಿನ ಆಂಡೀಸ್ ಪರ್ವತದಲ್ಲಿ ಉಗಮಹೊಂದಿ ಅಟ್ಲಾಂಟಿಕ್ ಸಾಗರವನ್ನು ಬ್ರಜಿಲ್‍ನ ಬೆಲಮ್ ಎಂಬಲ್ಲಿ ಸೇರುತ್ತದೆ. ಇದು 6,400 ಕಿಮೀ ಉದ್ದವಿದೆ. ಇದು ಪ್ರಪಂಚದ ಎರಡನೆಯ ಅತಿ ಉದ್ದವಾದ ನದಿ. ಇದು ಪೆರು, ಬೊಲಿವಿಯ, ವೆನಿಜೂಲ, ಈಕ್ವೆಡಾರ್ ಮತ್ತು ಬ್ರಜಿಲ್ ಮೂಲಕ ಹರಿಯುತ್ತದೆ. ಈ ನದಿ ಸು. 3,680ಕಿಮೀ ದೂರ ಒಳನಾಡಿನ ಜಲಸಾರಿಗೆಗೆ ಅನುಕೂಲವಾಗಿದೆ.

ಓರಿನೋಕೋ ನದಿ ಗಯಾನದ ಉನ್ನತ ಪ್ರದೇಶದಲ್ಲಿ ಉಗಮಹೊಂದಿ ಪೂರ್ವಭಿಮುಖವಾಗಿ 2,560 ಕಿಮೀ ದೂರ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಪ್ರಪಂಚದಲ್ಲಿ ಅತಿ ಎತ್ತರದಿಂದ ದುಮುಕುವ ಏಂಜಲ್ಸ್ ಜಲಪಾತ(972 ಮೀ) ವೆನಿಜೂಲದಲ್ಲಿದೆ.

ಪರಾನ ನದಿಯ ಪ್ರಮುಖ ಉಪನದಿಯಾದ ಪರಗ್ವೆ ಬ್ರಜಿಲ್‍ನ ಪಶ್ಚಿಮಭಾಗದಲ್ಲಿ ಉಗಮಹೊಂದಿ ಸು. 2,550 ಕಿಮೀ  ಉದ್ದ ಹರಿದು ಪರಾನ ನದಿಯನ್ನು ಆರ್ಜೆಂಟಿನದ ಉತ್ತರದ ಗಡಿಯಲ್ಲಿ ಸೇರುತ್ತದೆ.

ಪರಾನ ನದಿಯ ಕೇಂದ್ರ ಬ್ರಜಿಲ್‍ನ ದಕ್ಷಿಣ ಭಾಗದಲ್ಲಿ ರಿಯೊ ಗ್ರಾಂಡೆ ಮತ್ತು ಪರಾನಿ ಎಂಬೆರಡು ನದಿಗಳ ಸಂಗಮದಿಂದ ಆಗಿದೆ. ಇದರು 2,800 ಕಿಮೀ ಉದ್ದವಿದೆ. ಇದು ಬ್ರಜಿಲ್ ಮತ್ತು ಪರಗ್ವೆ ದೇಶಗಳ ನಡುವಿನ ಗಡಿ. ಇದು ಬ್ರಜಿಲ್, ಪರಗ್ವೆ ಮತ್ತು ಆರ್ಜೆಂಟಿನಗಳಲ್ಲಿ ಹರಿದು ಅಂತಿಮವಾಗಿ ಆರ್ಜೆಂಟಿನದ ರಿಯೋ-ಡಿ-ಲಾ-ಪ್ಲಾಟಾ ಎಂಬಲ್ಲಿ ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.

ಮಣ್ಣುಗಳು: ಲ್ಯಾಟಿನ್ ಅಮೆರಿಕದ ಬಹುತೇಕ ಪ್ರದೇಶದಲ್ಲಿ ಉಷ್ಣವಲಯದ ತೇವದ ವಾಯುಗುಣವಿದೆ. ಸ್ಥಳೀಯ ಶಿಲಾರಚನೆ ಮತ್ತು ವಾಯುಗುಣದ ಸ್ಥಿತಿಗತಿಗಳನ್ನು ಅವಲಂಬಿಸಿ ಕೆಂಪು, ಮರುಭೂಮಿ, ಪರ್ವತ ಹಾಗೂ ಅತ್ಯುತ್ತಮವಾದ ಚೆರ್ನೋಸಮ್ ಮಣ್ಣುಗಳು ಇಲ್ಲಿವೆ.

ಸ್ವಾಭಾವಿಕ ಸಸ್ಯವರ್ಗ: ಇದನ್ನು ಇಲ್ಲಿಯ ವಾಯುಗುಣ ಮತ್ತು ಭೂಸ್ವರೂಪ ನಿರ್ಧರಿಸುತ್ತದೆ. ಇಲ್ಲಿ ಕಂಡುಬರುವ ಪ್ರಮುಖ ಸಸ್ಯವರ್ಗಗಳು.

1. ಸಮಭಾಜಕ ವೃತ್ತದ ಅರಣ್ಯ: ಅಮೆಜಾನ್ ಪ್ರದೇಶದಲ್ಲಿ ಇದನ್ನು ಸೆಲ್ವಾಸ್ ಎಂದು ಕರೆಯಲಾಗಿದೆ. ಇದು ಉಷ್ಣ ಮತ್ತು ತೇವ ವಾಯುಗುಣವಿರುವ ಪ್ರದೇಶಗಳಲ್ಲಿದೆ. ಇಲ್ಲಿ ನಿತ್ಯ ಹರಿದ್ವರ್ಣದ, ವಿವಿಧ ಗುಂಪುಗಳಿಗೆ ಸೇರಿದ ರಬ್ಬರ್, ಮಹಾಗನಿ, ಎಬೊನಿ, ಬ್ರಜಿಲ್‍ನಟ್ ಮೊದಲಾದ ಮರಗಳು ಇವೆ. ಆದರೆ ಇವು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯ ಪಡೆದಿಲ್ಲ.
2. ಬೆಚ್ಚನೆಯ ಸಮಶೀತೋಷ್ಣ ವಲಯದ ಅರಣ್ಯ: ಇದು ಬ್ರಜಿಲ್‍ನ ಉನ್ನತ ಮತ್ತು ದಕ್ಷಿಣ ಭಾಗಗಳು, ಪರಗ್ವೆ ಮತ್ತು ಉರುಗ್ವೆಗಳಲ್ಲಿದೆ. ಇದು ಮೃದು ಮರಗಳು, ಆರ್ಥಿಕವಾಗಿ ಪ್ರಾಮುಖ್ಯ ಹೊಂದಿವೆ.
3. ತಂಪಾದ ಸಮಶೀತೋಷ್ಣವಲಯದ ಅರಣ್ಯ: ಆಂಡೀಸ್ ಪರ್ವತದ ಇಳಿಜಾರಿನಲ್ಲಿದೆ. ಇದು ಹೆಚ್ಚಾಗಿ 350ದಕ್ಷಿಣ ಅಕ್ಷಾಂಶದ ದಕ್ಷಿಣದಲ್ಲಿದೆ.
4. ಮೆಡಿಟರೇನಿಯನ್ ಸಸ್ಯವರ್ಗ: ಇದು ಚಿಲಿರಾಷ್ಟ್ರದ ಮಧ್ಯದಲ್ಲಿದೆ, ನಿತ್ಯಹರಿದ್ವರ್ಣ ಮತ್ತು ಶುಷ್ಕಸಸ್ಯವರ್ಗಗಳಿಂದ ಕೂಡಿದೆ.
5. ಸವನ್ನಾ ಹುಲ್ಲುಗಾವಲು: ಇದು ಅಮೆಜಾನ್ ಪ್ರದೇಶದ ಆಗ್ನೇಯ ಮತ್ತು ದಕ್ಷಿಣ ಭಾಗದಲ್ಲಿದೆ. ಅಮೆಜಾನ್ ಪ್ರದೇಶದ ದಕ್ಷಿಣಕ್ಕೆ ಮಳೆ ಮತ್ತು ಅರಣ್ಯ ಕಡಿಮೆಯಾಗುತ್ತಾಹೋಗುವುದರಿಂದ ಇಂಥ ಹುಲ್ಲುಗಾವಲು ಕಂಡುಬರುತ್ತದೆ. ಕ್ಯಾಂಪೋಸ್ ಪ್ರದೇಶದ ಹುಲ್ಲಿಗಾವಲನ್ನೆ ಸವನ್ನಾ ಎಂದು ಕರೆಯಲಾಗಿದೆ. ಓರಿನೋಕೋ ಪ್ರದೇಶದಲ್ಲಿ ಇದನ್ನು ಲಾನೋಸ್ ಎಂದೂ ಪರಗ್ವೆ ಮತ್ತು ಆರ್ಜೆಂಟಿನದ ಉತ್ತರದಲ್ಲಿ ಇದನ್ನು ಗ್ರಾನ್‍ಚಾಕೋ ಎಂದೂಕರೆಯ ಲಾಗಿದೆ.
6. ಪಂಪಾಸ್ ಹುಲ್ಲುಗಾವಲು: ಇದು ಸಮಶೀತೋಷ್ಣ ವಲಯದ ಹುಲ್ಲುಗಾವಲು, ಕ್ಯಾಂಪೋಸ್‍ನ ದಕ್ಷಿಣ ಭಾಗದಲ್ಲಿ ಮಳೆ ಕಡಿಮೆ ಇರುವಲ್ಲಿ ಈ ಬಗೆಯ ಸಸ್ಯ ವರ್ಗವಿದೆ. ಆದರೆ ಪಟಗೋನಿಯದ ಉತ್ತರದಲ್ಲಿ ಹುಲ್ಲು ಬಹಳ ವಿರಳ.
7. ಮರುಭೂಮಿ ಸಸ್ಯವರ್ಗ: ಅಟಕಾಮ ಮರುಭೂಮಿಯ ಶುಷ್ಕ ವಲಯದಲ್ಲಿ ಕಂಡುಬರುವುದು. ಇಲ್ಲಿ ಲಿಚೆನ್ಸ್ ಮತ್ತು ಕ್ಯಾಕ್ಟಸ್ ಮಾದರಿಯ ಸಸ್ಯವರ್ಗ ಕಂಡುಬರುವುದು.
ಆರ್ಥಿಕತೆ: ಲ್ಯಾಟಿನ್ ಅಮೆರಿಕದ ಸ್ವಾಭಾವಿಕ ಸಂಪನ್ಮೂಲ ಅತ್ಯಂತ ಸಂಪದ್ಭರಿತವಾಗಿದೆ. ಆದರೆ ಇಲ್ಲಿಯ ಸಾಧಾರಣ ಜನಸಂಖ್ಯೆಯಿಂದಾಗಿ ಮತ್ತು ಉನ್ನತ ತಂತ್ರಜ್ಞಾನದ ಕೊರತೆಯಿಂದಾಗಿ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲಾಗುತ್ತಿಲ್ಲ. ಇದಕ್ಕೆ ಇಲ್ಲಿಯ ಸೀಮಿತ ಆಂತರಿಕ ಮಾರುಕಟ್ಟೆಯೂ ಒಂದು ಕಾರಣ. ಇಲ್ಲಿಯ ಆರ್ಥಿಕತೆ ಮುಖ್ಯವಾಗಿ ಅರಣ್ಯಸಂಪತ್ತು, ಮೀನುಗಾರಿಕೆ, ಹೈನುಗಾರಿಕೆ, ಕೃಷಿ, ಖನಿಜ ಮತ್ತು ಶಕ್ತಿ ಸಂಪನ್ಮೂಲಗಳದು.

ಅರಣ್ಯ ಸಂಪನ್ಮೂಲಗಳು: ಪ್ರಪಂಚದ ಸುಮಾರು 1/4 ಭಾಗದಷ್ಟು ಅರಣ್ಯ ಈ ವಲಯದಲ್ಲಿದೆ. ಬ್ರಜಿಲ್‍ನ ಅಮೆಜಾನ್ ಪ್ರದೇಶ ಮತ್ತು ಅದರ ಸುತ್ತಲಿನ ಪ್ರದೇಶ ಪ್ರಪಂಚದಲ್ಲಿಯೇ ಅತಿದೊಡ್ಡದಾದ ಉಷ್ಣವಲಯದ ಅರಣ್ಯದಿಂದ ಕೂಡಿದೆ. ಇದನ್ನೂ ಸೆಲ್ವಾಸ್ ಎಂದು ಕರೆಯುತ್ತಾರೆ. ನಿರಂತರಮಳೆ, ಹೆಚ್ಚು ಉಷ್ಣಾಂಶ ಮತ್ತು ಸಾರಿಗೆಯ ತೊಂದರೆಯಿಂದಾಗಿ ಇಲ್ಲಿ ಅರಣ್ಯಗಾರಿಕೆ ಅಭಿವೃದ್ಧಿಹೊಂದಿಲ್ಲ. ಪ್ರಪಂಚದಲ್ಲಿ ಸೇ. 10ರಷ್ಟು ಮರದ ದಿಮ್ಮಿಗಳ ಪೂರೈಕೆ ಈ ವಲಯದಿಂದಲೇ. ಮಹಾಗನಿ, ಎಬೋನಿ, ರೋಸ್‍ವುಡ್, ಸಿಡಾರ್, ರಬ್ಬರ್, ತಾಳೆ. ಇಲ್ಲಿಯ ಪ್ರಮುಖ ಮರಗಳು.

ಮೃದುಮರಗಳು ಮುಖ್ಯವಾಗಿ ಚಿಲಿಯ ದಕ್ಷಿಣ ಭಾಗ, ಬ್ರಜಿಲ್, ಉರುಗ್ವೆ ಮತ್ತು ಮೆಕ್ಸಿಕೋದ ಆಂಡೀಸ್ ಉನ್ನತ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮರದ ದಿಮ್ಮಿಗಳ ಉತ್ಪಾದನೆಯಲ್ಲಿ ಈ ಪ್ರದೇಶ ಪ್ರಾಮುಖ್ಯ ಪಡೆದಿಲ್ಲ.

ಮೀನುಗಾರಿಕೆ: ಇಲ್ಲಿಯ ಸ್ವಾಭಾವಿಕ ಪರಿಸರ ವಾಣಿಜ್ಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಕರಾವಳಿ ನೇರವಾಗಿದೆ, ಉತ್ತಮ ಬಂದರುಗಳಿಲ್ಲ. ಹೆಚ್ಚು ಬೇಡಿಕೆಯಿಲ್ಲದಿರುವುದರಿಂದ ಮೀನುಗಾರಿಕೆ ಇಲ್ಲಿ ಅಭಿವೃದ್ಧಿ ಹೊಂದಿಲ್ಲ. ದಕ್ಷಿಣ ಪೆಸಿಫಿಕ್ ಸಾರಗದ ಹಂಬೋಲ್ಟ್‍ಶೀತೋದಕ ಪ್ರವಾಹ ಪ್ಲಾಂಕ್ಟನ್‍ಗಳ ಬೆಳೆವಣಿಗೆಗೆ ಅನುಕೂಲವಾಗಿರುವುದರಿಂದ ಚಿಲಿ ಮತ್ತು ಪೆರು ದೇಶಗಳಲ್ಲಿ ಈಚೆಗೆ ವಾಣಿಜ್ಯ ಮೀನುಗಾರಿಕೆ ಅಭಿವೃದ್ಧಿ ಹೊಂದಿದೆ.

ಪ್ರಾಣಿಸಂಪನ್ಮೂಲ: ಈ ಪ್ರದೇಶದಲ್ಲಿ ಉಷ್ಣ ಮತ್ತು ಸಮಶೀತೋಷ್ಣ ವಲಯದ ಹುಲ್ಲುಗಾವಲುಗಳಿವೆ. ಪ್ರಾಣಿಗಳ ಸಾಕಾಣಿಕೆ ಇಲ್ಲಿಯ ಜನರ ಮುಖ್ಯ ಉದ್ಯೋಗಗಳಲ್ಲಿ ಒಂದು. ಬ್ರಜಿಲ್ ದೇಶ ದನಕರುಗಳ ಸಂಖ್ಯೆಯಲ್ಲಿ ಪ್ರಪಂಚದಲ್ಲೆ ಎರಡನೆಯ ಸ್ಥಾನ ಪಡೆದಿದೆ. ಆರ್ಜೆಂಟಿನ, ಕೊಲಂಬಿಯ, ವೆನಿಜೂಲ ಮತ್ತು ಮೆಕ್ಸಿಕೋಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳಿವೆ. ಶೈತ್ಯಾಗಾರದ ವ್ಯವಸ್ಥೆ, ಬೇಡಿಕೆ ಮತ್ತು ಸಾಗರದ ಸಾಮೀಪ್ಯದಿಂದಾಗಿ ಪಶ್ಚಿಮ ಯುರೋಪಿಗೆ ಮಾಂಸವನ್ನು ರಫ್ತು ಮಾಡಲು ಸಾಧ್ಯವಾಗುತ್ತಿದೆ. ಬ್ರಜಿಲ್ ಗೋಮಾಂಸ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ 3ನೆಯ ಸ್ಥಾನ ಹೊಂದಿದೆ.

ಲ್ಯಾಟಿನ್ ಅಮೆರಿಕದಲ್ಲಿ ಕುರಿಸಾಕಣೆ ಮತ್ತೊಂದು ಪ್ರಮುಖ ಉದ್ಯೋಗ. ಆರ್ಜೆಂಟಿನ ಕುರಿಸಾಕಾಣಿಕೆಯಲ್ಲಿ ಪ್ರಮುಖ ದೇಶ. ಇಲ್ಲಿಯ ಪಂಪಾ ಪ್ರದೇಶದಲ್ಲಿ ಮಾಂಸದ ಕುರಿ ಹಾಗೂ ಪಟಗೋನಿಯ ಪ್ರದೇಶದಲ್ಲಿ ತುಪ್ಪಟದ ಕುರಿಗಳನ್ನು ಹೆಚ್ಚಾಗಿ ಸಾಕಲಾಗುತ್ತಿದೆ.

ಕೃಷಿ: ಇದು ಇಲ್ಲಿಯ ಒಂದು ಮುಖ್ಯ ಆರ್ಥಿಕ ಚಟುವಟಿಕೆ. ಪರಂಪರಾಗತ ಬೇಸಾಯ ಹಾಗೂ ಆಧುನಿಕ ತೋಟಗಾರಿಕಾ ಬೇಸಾಯ ಇಲ್ಲಿದೆ. ಆರ್ಜೆಂಟಿನ, ಬ್ರಜಿಲ್, ಚಿಲಿ, ಪೆರು, ಉರುಗ್ವೆ, ವೆನಿಜೂಲ, ಮೆಕ್ಸಿಕೋ, ಜಮೈಕ ಮತ್ತು ಪನಾಮ ದೇಶಗಳ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು ಸೇ. 10 ರಷ್ಟಿದೆ. ಗಯಾನ, ನಿಕರಾಗುವ, ಪರಗ್ವೆ, ಗ್ವಾಟೆಮಾಲ, ಹೈಟಿ, ಹೊಂಡುರಾಸ್ ಮತ್ತು ಬಿಲೈಜ್ ರಾಷ್ಟ್ರಗಳಲ್ಲಿ ಕೃಷಿಯ ಪಾಲಿ ಸೇ. 20ಕ್ಕಿಂತ ಹೆಚ್ಚಾಗಿದೆ. ಇಲ್ಲಿಯ ಪ್ರಮುಖ ಬೆಳೆಗಳು.
ಗೋದಿ, ಬತ್ತ, ಮೆಕ್ಕೆಜೋಳ, ಕಬ್ಬು, ಕಾಫಿ, ಕೋಕೊ, ಹತ್ತಿ, ರಬ್ಬರ್ ಮುಂತಾದವು.

ಸ್ವಾಭಾವಿಕ ಸಂಪನ್ಮೂಲಗಳು: ಈ ಪ್ರದೇಶದಲ್ಲಿ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳಿವೆ. ಕಬ್ಬಿಣದ ಅದುರು ಮುಖ್ಯವಾಗಿ ಬ್ರಜಿಲ್, ವೆನಿಜೂಲ, ಚಿಲಿ, ಮೆಕ್ಸಿಕೋ, ಪೆರು ಮತ್ತು ಕೊಲಂಬಿಯಗಳಲ್ಲಿ ವ್ಯಾಪಕವಾಗಿ ದೊರೆಯುತ್ತದೆ. ಬ್ರಜಿಲ್ ಕಬ್ಬಿಣದ ಅದುರಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ 2ನೆಯ ಸ್ಥಾನ ಹೊಂದಿದೆ. ಇಲ್ಲಿ ಮ್ಯಾಂಗನೀಸ್ ಅದುರೂ ದೊರಕುತ್ತಿದೆ. ಚಿಲಿ, ಪೆರು, ಮತ್ತು ಮೆಕ್ಸಿಕೋಗಳು ಪ್ರಪಂಚದ 1/3 ಭಾಗದಷ್ಟು ತಾಮ್ರವನ್ನು ಉತ್ಪಾದಿಸುತ್ತವೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಬಾಕ್ಸೈಟ್, ಬೆಳ್ಳಿ, ಚಿನ್ನ, ವಜ್ರದ ನಿಕ್ಷೇಪಗಳಿವೆ. ಯುರೇನಿಯಮ್, ಕಲ್ಲಿದ್ದಲು ಕೂಡಾ ದೊರೆಯುತ್ತವೆ.

ಲ್ಯಾಟಿನ್ ಅಮೆರಿಕ ಜಲವಿದ್ಯುತ್ತಿನ ಸಾಮಥ್ರ್ಯ ಪ್ರಪಂಚದ ಸೇ. 10ರಷ್ಟು. ಬ್ರಜಿಲ್, ಆರ್ಜೆಂಟಿನ ಮತ್ತು ವೆನಿಜೂಲಗಳಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕೈಗಾರಿಕೆಗಳು: ಲ್ಯಾಟಿನ್ ಅಮೆರಿಕ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಹೊಂದಿಲ್ಲ. ತಂತ್ರಜ್ಞಾನದ ಕೊರತೆ, ಕಡಿಮೆ ಜನಸಂಖ್ಯೆ ಮತ್ತು ಆಂತರಿಕ ಮಾರುಕಟ್ಟೆಯ ಕೊರತೆಯಿಂದಾಗಿ ಕೈಗಾರಿಕೆಗಳು ಅಭಿವೃದ್ಧಿಹೊಂದಿಲ್ಲ.

ಇಲ್ಲಿ ಕೃಷಿ ಪ್ರಮುಖವಾಗಿರುವುದರಿಂದ ಕೃಷಿಯಾಧಾರಿತ ಕೈಗಾರಿಕೆಗಳು ಹೆಚ್ಚಾಗಿವೆ. ಅಲ್ಲದೆ ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ, ಹಾಗೂ ಯಂತ್ರೋಪಕರಣ, ಹತ್ತಿಬಟ್ಟೆ, ಸಕ್ಕರೆ, ಹಡಗು ನಿರ್ಮಾಣ, ವಿಮಾನ ಕೈಗಾರಿಕೆಗಳಿವೆ.

ಸಾರಿಗೆ: ಬ್ರಜಿಲ್, ಮೆಕ್ಸಿಕೋ, ಆರ್ಜೆಂಟಿನ ಮತ್ತು ವೆನಿಜೂಲಗಳಲ್ಲಿ ರಸ್ತೆ ಸಾರಿಗೆ ಅಭಿವೃದ್ಧಿ ಹೊಂದಿದೆ. ಈ ಭಾಗದ ಪ್ರಮುಖರಸ್ತೆ ಎಂದರೆ ಪಾನ್ ಅಮೆರಿಕನ್ ಹೆದ್ದಾರಿ. ಇದು ಆರ್ಜೆಂಟಿನ, ಚಿಲಿ, ಪೆರು, ಈಕ್ವೆಡಾರ್ ಮತ್ತು ಕೊಲಂಬಿಯದ ಮೂಲಕ ಮೆಕ್ಸಿಕೋ ಪ್ರವೇಶಿಸಿ, ಅಲಾಸ್ಕದ ವರೆಗೆ ಸು. 24,000 ಕಿಮೀ ಗಳಷ್ಟು ಉದ್ದವಾಗಿದೆ.
ರೈಲ್ವೆಯೂ ಮುಖ್ಯವಾಗಿ ಆರ್ಜೆಂಟಿನ ಪಂಪಾ ಪ್ರದೇಶ, ಬ್ರಜಿಲ್‍ನ ಆಗ್ನೇಯಭಾಗ, ಮೆಕ್ಸಿಕೋದ ಮಧ್ಯಭಾಗ ಮತ್ತು ಚಿಲಿಯಲ್ಲಿ ವಿಸ್ತರಿಸಿದೆ. ಇಡೀ ದಕ್ಷಿಣ ಅಮೆರಿಕದಲ್ಲಿ ಖಾಂಡಾಂತರ ರೈಲ್ವೆ ಒಂದೇ ಒಂದು. ಅದು ಆರ್ಜೆಂಟಿನ, ಬ್ಯೂನಸ್ ಐರಿಸ್ ಮತ್ತು ಚಿಲಿಯ ವಾಲ್‍ಪರೈಸೋದ ನಡುವೆ ಸಂಪರ್ಕ ಕಲ್ಪಿಸಿದೆ.

ಇಲ್ಲಿ ವಾಯುಸಾರಿಗೆ ಮುಖ್ಯವಾಗಿ ಪ್ರಮುಖ ನಗರಗಳಾದ ರಿಯೋ-ಡಿ-ಜನೇರೋ, ಪನಾಮ, ಮೆಕ್ಸಿಕೋಸಿಟಿ, ಬಗೋಟ, ಸಾವೋ ಪೋಲೋ, ಸ್ಯಾಂಟಿಯಾಗೋ, ಲೈಮಾ, ಕ್ವಿಟೋ, ಕಾರಕಸ್, ಲ್ಯಾಪಜ್ó, ಹವಾನ, ಕಿಂಗಸ್ಟನ್ ಮತ್ತು ಬ್ಯೂನಸ್ ಐರೀಸ್‍ಗಳೊಂದಿಗೆ ಉತ್ತರ ಅಮೆರಿಕ ಹಾಗೂ ಯುರೋಪ್ ಖಂಡಗಳನ್ನು ಸಂಪರ್ಕಿಸುತ್ತದೆ.
ಒಳನಾಡಿನ ಜಲಸಾರಿಗೆ ಒಂದು ಪ್ರಮುಖವಾದ ಸಾರಿಗೆ ಮಾಧ್ಯಮ. ಅಮೇಜಾನ್, ಪ್ಲಾಜಾ, ಪನಾಮ ಮತ್ತು ಪರಗ್ವೆ ನದಿಗಳೂ ಒಳನಾಡಿನ ಜಲಸಾರಿಗೆ ರಬ್ಬರ್, ಆಹಾರ ಧಾನ್ಯಗಳು, ಮರದ ದಿಮ್ಮಿ, ಮಾಂಸ, ಕಾಫಿ, ಖನಿಜಗಳು, ಪೆಟ್ರೋಲಿಯಮ್, ಸಕ್ಕರೆ ಮತ್ತು ಇತರ ವಸ್ತುಗಳನ್ನು ಒಳನಾಡು ಸಾರಿಗೆಯ ಮೂಲಕ ಸಾಗಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪನಾಮಭೂಕಂಠದಲ್ಲಿ ನಿರ್ಮಾಣವಾಗಿರುವ ಪನಾಮ ಕಾಲುವೆ ಸಾಗರ ಸಾರಿಗೆಯಲ್ಲಿ ಅತ್ಯಂತ ಮಹತ್ತ್ವ ಪಡೆದಿದೆ. ಇದನ್ನು 1914 ಆಗಸ್ಟ್ 15ರಂದು ಪ್ರಾರಂಭಿಸಲಾಯಿತು. ಇತ್ತೀಚೆಗೆ ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಪನಾಮ ರಾಷ್ಟ್ರಕ್ಕೆ ಹಸ್ತಾಂತರಿಸಿತು.

ಲ್ಯಾಟಿನ್ ಅಮೆರಿಕದಲ್ಲಿ ಎರಡು ಮುಖ್ಯ ಸಮುದ್ರಮಾರ್ಗಗಳಿವೆ: ದಕ್ಷಿಣ ಅಟ್ಲಾಂಟಿಕ್ ಸಾಗರದ ಮಾರ್ಗ ಮತ್ತು ಪನಾಮಕಾಲುವೆ ಮಾರ್ಗ.

ನಗರೀಕರಣ: 1998ರ ಅಂಕಿಅಂಶಗಳಂತೆ ಲ್ಯಾಟಿನ್ ಅಮೆರಿಕದ ಸೇ. 75ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಸಾಧಾರಣ ನಗರೀಕರಣ ಹೊಂದಿದ ರಾಷ್ಟ್ರಗಳೆಂದರೆ ಹೊಂಡುರಾಸ್, ಗ್ವಾಟೆಮಾಲ, ಎಲ್‍ಸಾಲ್ವೆಡಾರ್, ಕಾಸ್ಟರಿಕ ಮತ್ತು ಪನಾಮ. ಅಧಿಕ ಜನರು ನಗರಗಳಲ್ಲಿ ವಾಸಿಸುವ ದೇಶಗಳು-ಮೆಕ್ಸಿಕೋ, ನಿಕರಾಗುವ, ಪೋರ್ಟರಿಕೊ, ಕ್ಯೂಬ, ಪೆರು, ಕೊಲಂಬಿಯ, ಚಿಲಿ, ಬ್ರಜಿಲ್, ವೆನಿಜೂಲ, ಉರುಗ್ವೆ ಮತ್ತು ಆರ್ಜೆಂಟಿನ. ಇಲ್ಲಿಯ ಬಹುತೇಕ ನಗರಗಳು ಕರಾವಳಿಯಲ್ಲಿವೆ.
ಜನಾಂಗದ ರಚನೆ: ಸ್ಥಳೀಯ ನಿವಾಸಿಗಳು ಅಮೆರಿಕನ್ ಇಂಡಿಯನ್ನರು. ಯುರೋಪಿಯನ್ನರ ಆಗಮನದಿಂದಾಗಿ ಇಲ್ಲಿ ಬೇರೆ ಬೇರೆ ದೇಶಗಳ ಜನರು ನೆಲಸಿದ್ದಾರೆ.
ಶಿಕ್ಷಣ: ಯುರೋಪಿಯನ್ನರ ಆಗಮನದಿಂದ ಇಲ್ಲಿ ಶಿಕ್ಷಣ ಮತ್ತು ಕ್ರಿಶ್ಚಿಯನ್‍ಧರ್ಮ ಪ್ರಚಾರಗೊಂಡಿತು. 1500ರ ಅನಂತರ ಇಲ್ಲಿ 4 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತು. 1538ರಲ್ಲಿ ಡೊಮಿನಿಕನ್ ಗಣರಾಜ್ಯದಲ್ಲಿ ಸ್ಯಾಂಟೋಡೋಮಿಂಗೋ, 1551ರಲ್ಲಿ ಪೆರುವಿನ ಲಿಮಾದಲ್ಲಿನ ಸ್ಯಾನ್‍ಮಾರ್ಕೊಸ್ ರಾಷ್ಟ್ರೀಯ ವಿಶ್ವವಿದ್ಯಾಲಯ, ಮೆಕ್ಸಿಕೋದ ಮೆಕ್ಸಿಕೋಸಿಟಿಯಲ್ಲಿನ ನ್ಯಾಷನಲ್ ಅಟನೋಮಸ್ ವಿಶ್ವವಿದ್ಯಾಲಯ. ಪುರುಷರ ಸಾಕ್ಷರತೆ ಸೇ. 88ರಷ್ಟು ಮತ್ತು ಸ್ತ್ರೀ ಸಾಕ್ಷರತೆ ಪ್ರಮಾಣ ಸೇ. 86.

ಲ್ಯಾಟಿನ್ ಅಮೆರಿಕದ ದೇಶಗಳು
ದೇಶಗಳು (ಸ್ವತಂತ್ರ)	- ರಾಜಧಾನಿಗಳು
1.  ಆಂಗುವ ಮತ್ತು ಬಾರ್‍ಬುಡ	- ಸೇಂಟ್ ಜಾನ್ಸ್
2.  ಆರ್ಜೆಂಟಿನ	- ಬ್ಯೂನಸ್ ಐರಿಸ್
3.  ಬಹಮಾಸ್	- ನಾಸು
4.  ಬಾರ್ಬೆಡೋಸ್	- ಬ್ರಿಡ್ಜ್‍ಟೌನ್
5.  ಬಿಲೈಜ಼್	- ಬೆಲ್‍ಮೋಪಾನ್
6.  ಬೊಲಿವಿಯ	- ಲಾಪಾಜ಼್ ; ಸೂಕರ್
7.  ಬ್ರಜಿಲ್	- ಬ್ರೆಸಿಲಿಯ
8.  ಚಿಲಿ	- ಸಾಂಟಿಯಾಗೋ
9.  ಕೊಲಂಬಿಯ	- ಬಗೋಟ
10. ಕಾಸ್ಟರಿಕ	- ಸಾನ್‍ಜೋಸ್
11. ಕ್ಯೂಬ	- ಹವಾನ
12. ಡೊಮಿನಿಕ	- ರೋಸೌ
13. ಡೊಮಿನಿಕನ್ ಗಣರಾಜ್ಯ - ಸ್ಯಾಂಟೊ ಡೊಮಿಂಗೊ
14. ಈಕ್ವೆಡಾರ್	- ಕ್ವಿಟೊ
15. ಎಲ್ ಸಾಲ್ವೆಡಾರ್	- ಸಾನ್ ಸಾಲ್ವೆಡರ್
16. ಗ್ರೆನಡ	- ಸೇಂಟ್ ಜಾಜ್ರ್ಸ್
17. ಗ್ವಾಟೆಮಾಲ	- ಗ್ವಾಟೆಮಾಲ ಸಿಟಿ
18. ಗಯಾನ 	- ಜಾರ್ಜ್‍ಟೌನ್
19. ಹೈಟಿ	- ಪೋರ್ಟ್-ಆ-ಪ್ರಿನ್ಸ್
20. ಹೊಂಡುರಾಸ್	- ತೆಗುಸಿಗಲ್ಪ
21. ಜಮೈಕ	- ಕಿಂಗ್ಸ್‍ಟನ್
22. ಮೆಕ್ಸಿಕೋ	- ಮೆಕ್ಸಿಕೋ ಸಿಟಿ
23. ನಿಕರಾಗುವ	- ಮನಾಗುವ
24. ಪನಾಮ	- ಪನಾಮ ಸಿಟಿ
25. ಪರಗ್ವೆ	- ಅಸುನ್‍ಸಿಯನ್
26. ಪೆರು	- ಲಿಮಾ
27. ಸೇಂಟ್ ಕಿಟ್ಸ್ ಮತ್ತು ನೆವಿಸ್	- ಬಸೆಟೆರೆ
28. ಸೇಂಟ್ ಲೂಸಿಯ	- ಕ್ಯಾಸ್ಟರಿಸ್
29. ಸೇಂಟ್ ವಿನ್ಸಂಟ್ ಮತ್ತು ಗ್ರೆನೆನಾಡಿನಸ್	- ಕಿಂಗ್ಸ್‍ಟೌನ್
30. ಸುರಿನಾಮ್	- ಪರಾಮರಿಬೊ
31. ಟ್ರಿನಿಡಾಡ್ ಮತ್ತು ಟೊಬಾಗೊ	-ಪೋರ್ಟ್ ಆಫ್ ಸ್ಪೇನ್
32. ಉರುಗ್ವೆ	- ಮಾಂಟೆವೀಡಿಯೊ
33. ವೆನಿಜೂಲ	- ಕಾರಕಸ್

ಅಧೀನ ರಾಷ್ಟ್ರಗಳು	- ರಾಜಧಾನಿ	- ಅವಲಂಬಿತ

1.  ಆಂಗ್ವುಲ್ಲ	- ದಿ ವ್ಯಾಲಿ	- ಬ್ರಿಟನ್
2.  ಅರುಬ	- ಓರಾನಜೆಸ್ಟಡ್	- ನೆದರ್‍ಲೆಂಡ್
3.  ಕೆಮಾನ್ ದ್ವೀಪಗಳು	- ಜಾರ್ಜ್‍ಟೌನ್	- ಬ್ರಿಟನ್
4.  ಫಾಕ್‍ಲೆಂಡ್ ದ್ವೀಪಗಳು	- ಸ್ಟಾನ್ಲೆ	- ಬ್ರಿಟನ್
5.  ಫ್ರೆಂಚ್ ಗಯಾನ	- ಕ್ಯಾವೆನೆ	- ಫ್ರಾನ್ಸ್
6.  ಗ್ವಾಡೆಲೂಪ್	- ಬಸ್ಸೆ-ಟೆರೆ	- ಫ್ರಾನ್ಸ್
7.  ಮಾರ್ಲೆನಿಕ್ಯ್	- ಪೋರ್ಟ್ ಡಿ ಫ್ರಾನ್ಸ್	- ಫ್ರಾನ್ಸ್
8.  ಮಾಂಟ್‍ಸೆರಾಂಟ್ಪ್ಲೈ -ಮಾತ್	- ಬ್ರಿಟನ್
9.  ನೆದರ್‍ಲೆಂಡ್ ಆ್ಯಂಟಿಲೆಸ್	- ವಿಲೆಮ್‍ಸ್ಟೆಡ್	- ನೆದರ್‍ಲೆಂಡ್
10. ಪೋರ್ಟರಿಕೊ	- ಸಾನ್‍ಜುವಾನ್	- ಅಮೆರಿಕ 
11. ಟಕ್ರ್ಸ್ ಮತ್ತು ಕೈಕಾಸ್ ದ್ವೀಪಗಳು  - ಗ್ರ್ಯಾಂಡ್ ಟರ್ಕ್	- ಬ್ರಿಟನ್
12. ವರ್ಜಿನ್ ದ್ವೀಪಗಳು (ಬ್ರಿಟಿಷ್) - ರೋಡ್‍ಟೌನ್	- ಬ್ರಿಟನ್
13. ವರ್ಜಿನ್ ದ್ವೀಪಗಳು 	- ಚಾರ್‍ಲೊಟ್ಟಿ 	- ಅಮೆರಿಕ  (ಅಮೆರಿಕ ಸಂಯುಕ್ತ	ಅಮೆಲಿಯ	 ಸಂಸ್ಥಾನ)
		
	(ಎಸ್.ಎಸ್.ಪಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ